ತಿಮಿಂಗಿಲ -
ಸಿಟೇಷಿಯ ಗಣದ ಹಲವಾರು ಬಗೆಯ ಬೃಹದ್ಗಾತ್ರದ ಸ್ತನಿಗಳಿಗಿರುವ ಸಾಮಾನ್ಯ ಹೆಸರು (ವೇಲ್). ಜಲವಾಸಿಗಳಾದ ಇವು ಬಹುವಾಗಿ ಸಾಗರಗಳಲ್ಲಿ ಜೀವಿಸುವುವು. ಕೆಲವು ಬಗೆಯವು ಉಷ್ಣವಲಯದ ನದಿಗಳಲ್ಲೂ ಸರೋವರಗಳಲ್ಲೂ ಕಾಣಬರುವುವು. ಈ ಗುಂಪಿನ ಸಣ್ಣ ಗಾತ್ರದ ಜೀವಿಗಳಿಗೆ ಡಾಲ್ಫಿನ್ ಮತ್ತು ಪಾರ್ಪಾಯಿಸುಗಳೆಂದು ಹೆಸರುಂಟು. 

ಸಾಮಾನ್ಯ ಲಕ್ಷಣಗಳು : ಸಿಟೇಷಿಯ ಗಣದಲ್ಲಿ ಮೂರು ಮುಖ್ಯ ಉಪಗಣಗಳಿವೆ : ಹಲ್ಲುಗಳುಳ್ಳ ಹಾಗೂ ಗತವಂಶಿಗಳಾದ ತಿಮಿಂಗಿಲಗಳನ್ನು ಒಳಗೊಂಡ ಆರ್ಕಿಯಾಸೀಟೈ; ಹಲ್ಲುಗಳುಳ್ಳ ಆಧುನಿಕ ತಿಮಿಂಗಿಲಗಳ ಗುಂಪಾದ ಒಡಾಂಟೊಸೀಟೈ ಮತ್ತು ತಿಮಿಮೂಳೆಯುಳ್ಳ (ವೇಲ್ ಬೋನ್ ಅಥವಾ ಬಲೀನ್) ತಿಮಿಂಗಿಲಗಳನ್ನು ಒಳಗೊಂಡಿರುವ ಮಿಸ್ಟಿಸೇಟೈ. ಈ ಮೂರು ಗುಂಪುಗಳ ತಲೆಬರುಡೆ ಲಕ್ಷಣಗಳಲ್ಲಿ ಮಾತ್ರವಲ್ಲದೆ ದಂತವಿನ್ಯಾಸದಲ್ಲೂ ವ್ಯತ್ಯಾಸಗಳುಂಟು. ಶರ್ಕಿಯಾಸೀಟೈ ಗುಂಪಿನ ತಿಮಿಂಗಲಗಳು ಅಸಮದಂತಿಗಳಾಗಿದ್ದುವು (ಅಂದರೆ ಇವುಗಳ ದವಡೆಯ ಮುಂಭಾಗದ ಹಲ್ಲುಗಳು ಹಾಗೂ ಹಿಂಭಾಗದ ಹಲ್ಲುಗಳ ಆಕಾರದಲ್ಲಿ ಭಿನ್ನತೆಯಿತ್ತು.) ಹಾಗೆಯೇ ಚಿಕ್ಕ ವಯಸ್ಸಿನ ತಿಮಿಂಗಿಲಗಳು ವಯಸ್ಸಿಗೆ ಬಂದಾಗ ಹಾಲುಹಲ್ಲುಗಳು ಬಿದ್ದುಹೋಗಿ ಶಾಶ್ವತ ಹಲ್ಲುಗಳು ಹುಟ್ಟಿಕೊಳ್ಳುತ್ತಿದ್ದವು. ( ಈ ಲಕ್ಷಣದಲ್ಲಿ ಈ ಗುಂಪಿನ ತಿಮಿಂಗಿಲಗಳು ಬಹುಪಾಲು ಸ್ತನಿಗಳನ್ನು ಹೋಲುತ್ತವೆ.) ಒಡಾಂಟೋಸೀಟೈ ಉಪಗಣದವು ಸಮದಂತಿಗಳು. ಹೆಚ್ಚಿನವುಗಳಲ್ಲಿ ಹಾಲುಹಲ್ಲುಗಳಿಲ್ಲ. ಮಿಸ್ಟಸೀಟೈ ಗುಂಪಿನ ವಯಸ್ಕ ತಿಮಿಂಗಿಲಗಳಲ್ಲಿ ಹಲ್ಲುಗಳೇ ಇಲ್ಲ. ಬದಲಿಗೆ ತಿಮಿಮೂಳೆಯ ಫಲಕಗಳು ಉಂಟು. 

ಒಡಾಂಟೋಸೀಟೈ ಗುಂಪಿನಲ್ಲಿ ಸುಮಾರು 70 ಪ್ರಭೇದಗಳುಂಟು. ಪಾರ್ಪಾಯಿ, ಡಾಲ್ಫಿನ್, ಚಾಲಕ ತಿಮಿಂಗಿಲ (ಪೈಲಟ್ ವೇಲ್), ಕಿಲರ್ ವೇಲ್, ಕೊಕ್ಕಿನ ತಿಮಿಂಗಿಲ (ಬೀಕ್ಡ್ ವೇಲ್), ಸ್ಪರ್ಮ್ ತಿಮಿಂಗಿಲ ಮುಂತಾದವನ್ನು ಈ ಗುಂಪು ಒಳಗೊಂಡಿದೆ. ಇವುಗಳ ಉದ್ದ ಸುಮಾರು 1.3 ಮೀಟರಿನಿಂದ (4' - 3')  ಹಿಡಿದು ಸುಮಾರು 18 ಮೀಟರಿನ (60') ವರೆಗೆ ಇದೆ. ಮಿಸ್ಟಿಸೀಟೈ ಗುಂಪಿನಲ್ಲಿ 10 ಪ್ರಭೇದಗಳಿವೆ. ಉದಾಹರಣೆ ಪಿಗ್ಮಿ ರೈಟ್ ವೇಲ್, ನೀಲಿ ತಿಮಿಂಗಿಲ (ಬ್ಲೂ ಹ್ವೇಲ್), ಇವುಗಳ ಉದ್ದ 6 ಮೀಟರಿನಿಂದ (ಸುಮಾರು 20') ಹಿಡಿದು 30 ಮೀಟರ್ (ಸುಮಾರು 100') ವರೆಗೆ ವ್ಯತ್ಯಾಸವಾಗುತ್ತದೆ. ತೂಕದಲ್ಲೂ ಈ ತೆರನ ವ್ಯತ್ಯಾಸ ಕಾಣಬಹುದು. ಉದಾಹರಣೆಗೆ ಕೆಲವು ತೆರನ ಪಾರ್ಪಾಯಿಸುಗಳು 45 ಕಿ.ಗ್ರಾಂ.  (100ಪೌಂಡು) ಇದ್ದರೆ ನೀಲಿ ತಿಮಿಂಗಿಲ 1,36,000 ಕಿ.ಗ್ರಾಂ. (150 ಟನ್) ತೂಗುತ್ತದೆ. ನೀರಿನಲ್ಲಿ ಈಜಲು ಸಹಾಯಕವಾಗುವಂತೆ ಆಧುನಿಕ ತಿಮಿಂಗಿಲಗಳ ದೇಹದ ಹಿಂತುದಿ ಮತ್ತು ಮುಂತುದಿಗಳು ಚೂಪಾಗಿವೆ; ಮುಂಚಲನೆಗೆ ಅನುಕೂಲವಾಗುವಂತೆ ಬಾಲದಲ್ಲಿ ಅಡ್ಡಡ್ಡವಾದ ಈಜುರೆಕ್ಕೆಯುಂಟು. ಇದರಲ್ಲಿ ಎಲುಬಿಲ್ಲ. ಬೆನ್ನ ಮೇಲೂ ಒಂದು ಈಜುರೆಕ್ಕೆಯುಂಟು. ಇದಕ್ಕೂ ಎಲುಬಿಲ್ಲ. ಉಸಿರಾಟ ತಲೆಯ ಮೇಲ್ಭಾಗದಲ್ಲಿರುವ ಊದುಗಂಡಿಗಳ (ಬ್ಲೋಹೋಲ್ಸ್) ಮೂಲಕ ನಡೆಯುವುದು. ಒಡಾಂಟೋಸೀಟೈ ಗುಂಪಿನವುಗಳಲ್ಲಿ ಒಂದೇ ಒಂದು ಊದುಗಂಡಿಯಿದ್ದರೆ, ಮಿಸ್ಟಿಸೀಟೈ ಗುಂಪಿನ ತಿಮಿಂಗಿಲಗಳಲ್ಲಿ ಎರಡು ಕಂಡಿಗಳಿವೆ. ಉಸಿರನ್ನು ಈ ಕಂಡಿಗಳಿಂದ ಹೊರಬಿಟ್ಟಾಗ ಅದರಲ್ಲಿನ ನೀರು ತತ್‍ಕ್ಷಣ ಘನೀಭೂತವಾಗಿರುವುದರಿಂದ ಒಂದು ತೆರನ ಕಾರಂಜಿಯುಂಟಾಗುತ್ತದೆ. ಅನಂತರ ಗಾಳಿಯನ್ನು ಒಳಗೆಳೆದುಕೊಂಡು ತಿಮಿಂಗಿಲ ನೀರಿನೊಳಕ್ಕೆ ಮುಳುಗಿಕೊಂಡೇ ಈಜುತ್ತದೆ. ಹೀಗೆ ಮುಳುಗಿಕೊಂಡಾಗ ಅದು ಕೆಲವು ನಿಮಿಷಗಳಿಂದ ಹಿಡಿದು (ಚಿಕ್ಕಗಾತ್ರದ ತಿಮಿಂಗಿಲಗಳಲ್ಲಿ) ಒಂದು ಇಲ್ಲವೇ ಕೆಲವು ಗಂಟೆಗಳವರೆಗೆ (ದೊಡ್ಡ ಗಾತ್ರದ ತಿಮಿಂಗಿಲಗಳು) ಉಸಿರನ್ನು ಹಿಡಿದಿಟ್ಟುಕೊಂಡಿರಬಲ್ಲುದು.

ತಿಮಿಂಗಲದ ದೇಹ ಬಾಲದ ಕಡೆಗೂ ಮೂತಿಯೆಡೆಗೂ ಚೂಪಾಗಿದೆ ಎಂದು ಮೇಲೆಯೇ ಹೇಳಿದೆ. ಮೂತಿ ಹೆಚ್ಚು ಕಡಿಮೆ ಚೂಪಾದ ಕೊಕ್ಕಿನಂತಿರಬಹುದು, ಗುಂಡಾಗಿರಬಹುದು ಅಥವಾ ಚಪ್ಪಟೆಯಾಗಿರಬಹುದು. ಮುಂಗಾಲುಗಳು ದೋಣಿಯ ಹುಟ್ಟಿನ ಆಕಾರದ ಇಲ್ಲವೆ ಕುಡುಗೋಲಿನ ಆಕಾರದವು. ಇವಕ್ಕೆ ಫ್ಲಿಪರ್ಸ್ ಎಂದು ಹೆಸರು. ಇವು ದೇಹದ ಸಮತೋಲವನ್ನು ಕಾಪಾಡುವುವಲ್ಲದೆ ಈಜುವಾಗ ದಿಕ್ಕನ್ನು ಬದಲಿಸಲೂ ಸಹಾಯಕವಾಗುವುವು. ಫ್ಲಿಪರುಗಳಲ್ಲಿ ಸಸ್ತನಿಗಳ ಮುಂಗಾಲಿನಲ್ಲಿ ಇರುವ ಎಲ್ಲ ಮೂಳೆಗಳನ್ನೂ ಗುರುತಿಸಬಹುದು. ತಿಮಿಂಗಿಲಗಳಲ್ಲಿ ಹಿಂಗಾಲಿನ ಬಾಹ್ಯಗೋಚರ ಭಾಗಗಳಾವುವೂ ಇಲ್ಲ. ದೊಡ್ಡ ಗಾತ್ರದ ಕೆಲವು ತಿಮಿಂಗಿಲಗಳಲ್ಲಿ ವಸ್ತಿಕುಹರಕ್ಕೆ ಅಂಟಿಕೊಂಡಂತೆ ಹಿಂಗಾಲಿನ ಕೆಲವು ಮೂಳೆಗಳನ್ನೂ ಕಾಣಬಹುದು. 
ತಲೆಯ ಉದ್ದ ದೇಹದ ಒಟ್ಟು ಉದ್ದದ ಹತ್ತನೇ ಒಂದು ಭಾಗದಷ್ಟಿರಬಹುದು (ಹಲ್ಲಿರುವ ಕೆಲವು ಬಗೆಗಳಲ್ಲಿ) ಇಲ್ಲವೇ ಹೆಚ್ಚು ಕಡಿಮೆ ಅರ್ಧದಷ್ಟಿರಬಹುದು (ಸ್ಪರ್ಮ್ ವೇಲ್). ಕಿವಿಯ ರಂಧ್ರಗಳು ಅತ್ಯಂತ ಚಿಕ್ಕವಾಗಿವೆ : ಹೊರಗಿವಿ ಇಲ್ಲ. ಕಣ್ಣುರೆಪ್ಪೆಗಳುಂಟು. 

ಚರ್ಮದಲ್ಲಿ ತೆಳುವಾದ ಕೊಬ್ಬಿನ ಹೊರಪದರವುಂಟು. ಒಳಪದರಿನ ಬಣ್ಣ ಸಾಮಾನ್ಯವಾಗಿ ಮೇಲೆ ಕಪ್ಪು, ಕೆಳಗೆ ಬಿಳಿ, ಕೆಲವು ಮಾತ್ರ ಪೂರ್ತಿ ಕಪ್ಪು ಅಥವಾ ಬಿಳಿ. ದಕ್ಷಿಣ ಧ್ರುವವ ರಾರ್‍ಕ್ವಲ್‍ಗಳ ದೇಹದ ಮೇಲೆ ಡಯಾಟಮ್‍ಗಳು ಇರುವುದರಿಂದ ಅವುಗಳ ಮೈ ಹಳದಿ ಬಣ್ಣದ್ದಾಗಿ ಕಾಣುವುದು. ಚರ್ಮದಲ್ಲಿ ಯಾವ ಗ್ರಂಥಿಗಳೂ ಇಲ್ಲ. ಚರ್ಮದ ಕೆಳಭಾಗದಲ್ಲಿ ಬ್ಲಬರ್ ಎಂಬ ಕೊಬ್ಬಿನ ದಪ್ಪ ಪದರವಿದೆ. ಇದು ತಿಮಿಂಗಿಲದ ವಿಶಿಷ್ಟ ಲಕ್ಷಣ. ಇದರಲ್ಲಿ ಹೇರಳವಾಗಿ ಎಣ್ಣೆಯಿದೆ. ಸ್ಪರ್ಮ್ ತಿಮಿಂಗಿಲದಲ್ಲಿ ಇದರ ದಪ್ಪ 35 ಸೆಂ.ಮೀ.; ಗ್ರೀನ್ ಲೆಂಡ್ ತಿಮಿಂಗಿಲದಲ್ಲಿ 50 ಸೆಂ.ಮೀ., 70 ಟನ್ನು ಭಾರದ ತಿಮಿಂಗಿಲದಲ್ಲಿನ ಬ್ಲಬರ್ ತೂಕ 30 ಟನ್ನು ಇರುವುದುಂಟು. ಕೂದಲು ಇಲ್ಲದ ಕಾರಣ ದೇಹದ ಉಷ್ಣತೆ ಕಡಿಮೆಯಾಗದಂತೆಯೂ ಉಷ್ಣ ಪ್ರದೇಶಗಳಲ್ಲಿ ಹೆಚ್ಚಾಗದಂತೆಯೂ ಈ ಬ್ಲಬರ್ ತಡೆಯುವುದು, ಅಲ್ಲದೆ ಆಹಾರ ಕಡಿಮೆಯಾದಲ್ಲಿ ಬ್ಲಬರ್‍ನಲ್ಲಿರುವ ಕೊಬ್ಬು ಆಹಾರವಾಗಿ ಉಪಯೋಗವಾಗುವುದು. ಚಯಾಪಚಯ ಕ್ರಿಯೆಗಳಿಗೆ ಅಗತ್ಯವಾದ ನೀರನ್ನು ಸಹ ಇದು ಒದಗಿಸುವುದು, ಆಳಕ್ಕೆ ಮುಳುಗಿದಾಗ ನೀರಿನ ಒತ್ತಡದಿಂದ ಅಂಗಾಂಗಗಳು ಜಜ್ಜಿ ಹೋಗದಂತೆ ಕಾಪಾಡುತ್ತದೆ. 

ಪಾರ್ಪಾಯಿಸ್‍ಗಳು ಮತ್ತು ಕಡಲಹಂದಿಗಳಂಥ ಹಲ್ಲಿರುವ ತಿಮಿಂಗಿಲಗಳು ಮುಖ್ಯವಾಗಿ ಮೀನುಗಳನ್ನು ತಿನ್ನುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಎರಡು ದವಡೆಗಳಲ್ಲಿಯೂ ಹಲ್ಲುಗಳು ಒಂದೇ ಬಗೆಯ ಗೂಟಗಳಂತಿರುವುವು. ದವಡೆಗಳು ಉದ್ದವಾಗಿರುವುದರಿಂದ ಹಲ್ಲುಗಳ ಅಗಿಯುವ ಕೆಲಸ ಕಡಿಮೆಯಾಗಿದೆ. ಬಹುಶಃ ಆಹಾರವನ್ನು ಹಿಡಿದುಕೊಳ್ಳಲು ಹಲ್ಲುಗಳು ಸಹಕಾರಿಯಾಗಿವೆ. ಕಿಲರ್ ತಿಮಿಂಗಿಲ ಅರ್ಸಿನಸ್‍ನಲ್ಲಿ ಬಲವಾದ ದವಡೆಗಳು ಮತ್ತು ಹಲ್ಲುಗಳಿವೆ. ಇವು ಮೀನುಗಳ ಜೊತೆಗೆ ಕಡಲುಹಂದಿ, ಹಕ್ಕಿ, ಕಡಲುನಾಯಿ ಹಾಗೂ ದೊಡ್ಡ ತಿಮಿಂಗಿಲಗಳ ಮಾಂಸವನ್ನು ತಿನ್ನುತ್ತವೆ. ಕೇವಲ ಸ್ಕ್ವಿಡ್ಡುಗಳನ್ನೇ ತಿನ್ನುವ ಪ್ರಭೇದಗಳಲ್ಲಿ ಹಲ್ಲುಗಳ ಸಂಖ್ಯೆ ಕಡಿಮೆಯಾಗಿರುವ ಪ್ರವೃತ್ತಿಯನ್ನು ಕಾಣಬಹುದು. ಉದಾಹರಣೆಗೆ ಸ್ಪರ್ಮ್ ತಿಮಿಂಗಿಲದಲ್ಲಿ ಹಲ್ಲುಗಳು ಕೇವಲ ಕೆಳದವಡೆಯಲ್ಲಿ ಮಾತ್ರ ಇವೆಯಾದರೆ ಬುರುಡೆ ಮೂಗು ಅಥವಾ ಕೊಕ್ಕಿನ ತಿಮಿಂಗಿಲಗಳಲ್ಲಿ ಒಂದು ಅಥವಾ ಎರಡು ಜೊತೆ ಹಲ್ಲುಗಳು ಮಾತ್ರ ಇವೆ. 

ತಿಮಿಮೂಳೆ ತಿಮಿಂಗಿಲಗಳಲ್ಲಿ ಹಲ್ಲುಗಳು ಭ್ರೂಣಾವಸ್ಥೆಯಲ್ಲಿವೆ. ತಿಮಿಮೂಳೆಗಳ ಸಹಾಯದಿಂದಲೇ ಉಪಜೀವಿಗಳನ್ನು ಸಂಗ್ರಹಿಸಿ ಇವು ತಿನ್ನುತ್ತವೆ. ಇವುಗಳ ದವಡೆಗಳು ತುಂಬ ಉದ್ದವಾಗಿವೆ. ಗ್ರೀನ್ ಲೆಂಡ್ ರೈಟ್ ತಿಮಿಂಗಿಲಗಳಲ್ಲಿ ದವಡೆಗಳು ದೇಹದ ಒಟ್ಟು ಉದ್ದದ ಮೂರನೇ ಒಂದು ಭಾಗದಷ್ಟಿವೆ; ಮೇಲಿನ ದವಡೆಯಲ್ಲಿ ಒಂದೊಂದು ಪಕ್ಕದಲ್ಲೂ ತ್ರಿಭುಜಾಕಾರದ 300-400 ಕೊಂಬಿನ ಫಲಕಗಳಿಂದ ರಚಿತವಾದ ತಿಮಿಮೂಳೆ ಉಂಟು. ಎರಡೂ ಪಕ್ಕಗಳ ತಿಮಿಮೂಳೆಗಳು ಮುಂತುದಿಯಲ್ಲಿ ಕೂಡಿಕೊಂಡಿವೆ. ಫಲಕಗಳು ಒಸಡಿನಲ್ಲಿ ಹೂತುಕೊಂಡಂತಿವೆ. ಇವುಗಳ ಕೆಳ ಅಂಚಿನಲ್ಲಿ ಉದ್ದವಾದ ಕೊಂಬಿನ ಕೂದಲುಗಳುಂಟು. ಬಾಯಿ ಮುಚ್ಚಿಕೊಂಡಾಗ ಫಲಕಗಳು ಹಿಂದಕ್ಕೆ ಬಾಗುವುವು. ಮತ್ತು ಬಾಯಿ ತೆರೆದಾಗ ನೀಳವಾಗಿ ನಿಲ್ಲುವುವು. ಗ್ರೀನ್ ಲೆಂಡ್ ತಿಮಿಂಗಿಲದಲ್ಲಿ ತಿಮಿಮೂಳೆಯ ಉದ್ದ 5m, ಕೆಳದವಡೆಯ ಎರಡು ಪಾಶ್ರ್ವಗಳು ಹೊರಕ್ಕೆ ಬಾಗಿರುವುದರಿಂದ ಬಾಯಿ ವಿಶಾಲವಾಗಿದೆ. ನಾಲಿಗೆ ತುಂಬಾ ದಪ್ಪ. ಫಲಕಗಳ ಹೊರತುದಿಗಳನ್ನು ದೊಡ್ಡ ಕೆಳತುಟಿಗಳು ಮುಚ್ಚಿರುವುದರಿಂದ ನೀರು ತಿಮಿಮೂಳೆಯ ಕೂದಲಿನ ಮಧ್ಯೆ ಹೊರ ಹೋಗಬೇಕಾಗುವುದು. ತೇಲುಜೀವಿಗಳು ಹೇರಳವಾಗಿ ಇರುವಕಡೆ ಬಾಯಿ ತೆರೆದುಕೊಂಡು ತಿಮಿಂಗಿಲ ಈಜುವಾಗ ನೀರಿನ ಜೊತೆಯಲ್ಲಿ ಇವು ಬಾಯಿಯನ್ನು ಸೇರುವುವು ಅನಂತರ ಬಾಯಿ ಮುಚ್ಚಿ ನಾಲಿಗೆಯನ್ನು ಎತ್ತರಿಸಿದಾಗ ನೀರು ತಿಮಿಮೂಳೆಯ ಕೂದಲಿನ ಮಧ್ಯೆ ಹೊರಬರುವುದು. ತೇಲುಜೀವಿಗಳು ಮಾತ್ರ ಬಾಯಿಯಲ್ಲೇ ಉಳಿಯುವುವು. ಈ ವಿಧಾನದಿಂದ ಅಗಾಧ ಪರಿಮಾಣದ ತೇಲುಜೀವಿಗಳನ್ನು ತಿಮಿಂಗಿಲಗಳು ನುಂಗುವುವು. ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ತೇಲುಜೀವಿಗಳು ಅತ್ಯಧಿಕ. ತಿಮಿಂಗಿಲಗಳು ಆಹಾರಕ್ಕಾಗಿ ಅಲ್ಲಿಗೆ ವಲಸೆ ಹೋಗುವುವು. ಈ ತೆರನ ಆಹಾರ ಸಮೃದ್ಧಿಯಿಂದ ಕೆಲವು ತಿಮಿಂಗಿಲಗಳು ದೈತ್ಯಾಕಾರವಾಗಿ ಬೆಳೆಯಲು ಅನುಕೂಲವಾಗಿದೆ. 

ತಿಮಿಂಗಿಲಗಳು ಇತರ ಸ್ತನಿಗಳಂತೆ ಮರಿಗಳನ್ನು ಈಯುತ್ತವೆ. ತಿಮಿಮೂಳೆ ತಿಮಿಗಳು ಎರಡು ವರ್ಷಗಳಿಗೊಮ್ಮೆ ಈಯುತ್ತವಾದರೆ ಉಷ್ಣವಲಯದ ಪ್ರಬೇಧಗಳಲ್ಲಿ (ಸ್ಪರ್ಮ್ ತಿಮಿಂಗಿಲ) ನಿರ್ದಿಷ್ಟ ಋತುಕಾಲವಿಲ್ಲ. ಸಾಮಾನ್ಯವಾಗಿ ಗರ್ಭಧಾರಣೆ ಕಾಲ; ಒಂದು ವರ್ಷ. ಒಂದು ಸಲಕ್ಕೆ ಒಂದು ಮರಿ ಹುಟ್ಟುತ್ತದೆ. ಅಪರೂಪಕ್ಕೆ ಅವಳಿಗಳಾಗುವುದುಂಟು. ನೀಲ ತಿಮಿಂಗಿಲದಲ್ಲಿ 7 ಮರಿಗಳು ಹುಟ್ಟಿದ ದಾಖಲೆ ಇದೆ. ಹುಟ್ಟಿದ ಮರಿ ತಾಯಿಯ ಮೂರನೇ ಒಂದು ಭಾಗದಷ್ಟು ಉದ್ದ ಇರುವುದು. ತಿಮಿಮೂಳೆ ತಿಮಿಂಗಿಲದ ಮರಿ 6m. ಉದ್ದ ಇರುತ್ತದೆ. ತಾಯಿ ತಿಮಿಂಗಿಲದ ತೊಡೆಯ ಪ್ರದೇಶದಲ್ಲಿ ಒಂದು ಜೊತೆ ಮೊಲೆ ತೊಟ್ಟುಗಳಿವೆ. ಸ್ತನ ಗ್ರಂಥಿಗಳಲ್ಲಿ ವಿಶೇಷ ರೀತಿಯ ಸಂಗ್ರಹ ಕೋಶ ಮತ್ತು ಮಾಂಸಗಳಿವೆ. ಇದರಿಂದಾಗಿ ಹಾಲನ್ನು ಮರಿಯ ಬಾಯಿಗೆ ಪಂಪ್ ಮಾಡಲು ಸಹಾಯಕವಾಗಿದೆ. 

ಆಹಾರ ಅನ್ವೇಷಣೆಗೆ ಹಾಗೂ ಸಂತಾನೋತ್ಪತ್ತಿಗೆ ಕೆಲವು ಪ್ರಭೇದಗಳು ವಲಸೆ ಹೋಗುತ್ತವೆ. ಉದಾಹರಣೆಗೆ ಗೂನುಬೆನ್ನು ತಿಮಿಂಗಿಲಗಳು ಬೇಸಿಗೆಯಲ್ಲಿ ದಕ್ಷಿಣ ಧ್ರುವದಲ್ಲಿ ಕ್ರಿಲ್ ತಿಂದು ಕಾಲ ಕಳೆದು ಸಂತಾನೋತ್ಪತ್ತಿಗೆಂದು ಎತ್ತರದ ಉಷ್ಣವಲಯದ ನೀರಿಗೆ ಬರುತ್ತವೆ. ತಿಮಿಂಗಿಲಗಳ ಆಯಸ್ಸು ಎಷ್ಟೆಂದು ಎಂದು ನಿರ್ದಿಷ್ಟವಾಗಿ ತಿಳಿಯದು. ಮರಿ ಒಂದು ವರ್ಷದವರೆಗೆ ತಾಯಿಯ ಜೊತೆಯಲ್ಲಿದ್ದು ಹಾಲನ್ನು ಕುಡಿದು 12-16 m. ಗಳ ವರೆಗೂ ಬೆಳೆಯುವುದು. ತಿಮಿಂಗಿಲಗಳು ಸಂಘಜೀವಿಗಳು. ಗುಂಪಾಗಿ ಚಲಿಸುವುವು. ಗಾಯಗೊಂಡ ಅನುಯಾಯಿ ಅಥವಾ ಆಗತಾನೇ ಜನಿಸಿದ ಮರಿಗಳು ನೀರಿನ ಮೇಲೆಯೇ ಇರುವಂತೆ ಮಾಡಲು ತಿಮಿಂಗಿಲಗಳು ಪರಸ್ಪರ ಸಹಕರಿಸುತ್ತವೆ. ಒಂದೇ ಸಮನೆ ಎಷ್ಟೋ ದಿವಸಗಳವರೆಗೆ ಹಡಗುಗಳನ್ನು ಹಿಂಬಾಲಿಸುವುದರಿಂದ ತಿಮಿಂಗಿಲಗಳು ನಿದ್ರಿಸುವುದಿಲ್ಲವೆಂಬ ಅಭಿಪ್ರಾಯವಿದೆ. 

ತಿಮಿಂಗಿಲಗಳ ದೇಹದಿಂದ ಹಲವು ಉಪಯುಕ್ತ ಪದಾರ್ಥಗಳನ್ನು ಪಡೆಯಬಹುದು. ತಿಮಿಮೂಳೆಗಳನ್ನು ಮೀನು ಹಿಡಿಯುವ ಕಡ್ಡಿಗಳಾಗಿಯೂ ಬಿಗಿಯಾದ ಕುಪ್ಪುಸಗಳಿಗೆ ಮತ್ತು ಬ್ರಷ್‍ಗಳಿಗೆ ಉಪಯೋಗಿಸುವುದುಂಟು. ಬ್ಲಬರ್‍ನಿಂದ ತೆಗೆದ ಎಣ್ಣೆಯನ್ನು ಕೃತಕ ಬೆಣ್ಣೆ, ಸಾಬೂನು ಮತ್ತು ಹೆರೆಯೆಣ್ಣೆಯ ತಯಾರಿಕೆಯಲ್ಲಿ ಬಳಸುವರು. ಸ್ಪರ್ಮ್ ತಿಮಿಂಗಿಲದಿಂದ ಬಿಳಿ ಮೇಣದಂಥ ಸ್ಪರ್ಮಸಿಟಿಯನ್ನು ಮತ್ತು ಕರುಳಿನಲ್ಲಿರುವ ಗಡುಸಾದ ಆಂಬರ್‍ಗ್ರಿಸ್ ಅನ್ನು (ಪನ್ನಂಬರ್) ಪಡೆಯಲಾಗುತ್ತದೆ. ಸ್ಪರ್ಮಸಿಟಿಯನ್ನು ಔಷಧಿ ಮತ್ತು ಕಾಂತಿವರ್ಧಕ ಪದಾರ್ಥಗಳಲ್ಲಿಯೂ ಆಂಬರ್‍ಗ್ರಿಸ್‍ನ್ನು ಪರಿಮಳ ದ್ರವ್ಯಗಳಲ್ಲಿಯೂ ಉಪಯೋಗಿಸಲಾಗುವುದು. ಮೂಳೆ ಮತ್ತು ಮಾಂಸವನ್ನು ಒಣಗಿಸಿ ಪುಡಿ ಮಾಡಿ ಗೊಬ್ಬರವಾಗಿ (ಗ್ವಾನೋ) ಉಪಯೋಗಿಸುವರು. ಕೆಲವು ಪ್ರಭೇದಗಳ ಮಾಂಸವನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಆದ ಕಾರಣ ತಿಮಿಂಗಿಲಗಳನ್ನು ಬೇಟೆಯಾಡುವ ಉದ್ಯಮ ನಾಲ್ಕಾರು ಶತಮಾನಗಳಿಂದ ನಡೆದು ಬಂದಿದೆ. 
(ಎ.ಎಸ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ